ಹೌದು ರಫೀಖ್ ಆತೂರು, ಇವರ ಪರಿಚಯವಿರದವರು ಅತೀ ವಿರಳ.ಕರಾವಳಿ ತೀರದ ಸಾಮಾಜಿಕ ಕಾರ್ಯಕರ್ತರ ಪಟ್ಟಿಯಲ್ಲಿ ಇವರ ಹೆಸರು ಹಲವು ಸಂದರ್ಭಗಳಲ್ಲಿ ಕೇಳಿ ಬರುತ್ತಿತ್ತು. ಆತೂರು ಎಂಬ ಗ್ರಾಮೀಣ ಪ್ರದೇಶವು ಇವರಿಂದ ರಾಜ್ಯದ ಹಲವು ದಿಕ್ಕುಗಳಲ್ಲಿ ಹೆಸರುವಾಸಿಯಾಯಿತು.ಕೋವಿಡ್ ಸಂಕಷ್ಟದ ವೇಳೆ ಅನಿವಾಸಿ ಭಾರತೀಯರಿಗೆ ತಾಯ್ನಾಡಿಗೆ ಮರಳಲು ಚಾರ್ಟರ್ಡ್ ಫ್ಲೈಟ್ ಸೇವೆ ,SKSSF ವಿನಂತಿಯ ಮೇರೆಗೆ ಕೋವಿಡ್ ನಿಯಂತ್ರಣಕ್ಕಾಗಿ ಬೇಕಾಗುವ ಸಲಕರಣೆಗಳು ಹಾಗೂ ಆಕ್ಸಿಜನ್ ಸಿಲಿಂಡರ್ ಸಹಿತ ಹಲವು ಉಪಕರಣಗಳು ಇವರ ಶ್ರಮಫಲವೆಂಬಂತೆ ತಾಯ್ನಾಡಿಗೆ ತಲುಪಿದ್ದು ಎಲ್ಲರಿಗೂ ತಿಳಿದ ವಿಚಾರ.
ತಾಯ್ನಾಡಿನಲ್ಲಿ ಕಾರ್ಯಾಚರಿಸುತ್ತಿರುವ ಸಂಘ ಸಂಸ್ಥೆಗಳಿಗೆ ಹಾಗೂ ಊರಿನ ಮಸೀದಿ ಮದರಸ ಹಾಗೂ ಧಾರ್ಮಿಕ -ಶೈಕ್ಷಣಿಕ ಚಟುವಟಿಕೆಗಳಿಗೆ ನೀಡಿದ ಸಹಾಯ ಹಸ್ತವು ಅವರ ಜನಾಝ ಸಂದರ್ಶಿಸಿ ಹೊರಬರುತ್ತಿರುವವರ ನಾಲಗೆಗಳಲ್ಲಿ ಸರಾಗವಾಗಿ ಹರಿದುಬರುತ್ತಿತ್ತು
*ದಾರುನ್ನೂರ್ ಯು ಎ ಇ ರಾಷ್ಟ್ರೀಯ ಸಮಿತಿಯ ಪ್ರತಿನಿಧಿಗಳು ದಾರುನ್ನೂರ್ ಸಂದರ್ಶನಕ್ಕೆ ಬಂದ ವೇಳೆ ನಾನು ಮೊದಲನೇ ಬಾರಿ ಅವರನ್ನು ಭೇಟಿಯಾಗಿದ್ದೆ.ಪರಿಚಯವನ್ನು ಹಂಚಿಕೊಂಡ ಬಳಿಕ ನಮ್ಮ ನೆರೆ ಊರಿನ ಉಸ್ತಾದ್ ಎಂದು ಹೆಮ್ಮೆಯಿಂದ ಹೇಳಿದ್ದು, ಬಳಿಕ ಇನ್ನಷ್ಟು ಮಾತುಕತೆ ನಡೆಸಿ ಆತ್ಮೀಯತೆಯನ್ನು ಬೆಳೆಸಿಕೊಂಡಿದ್ದರು.
ಮೊದಲನೇ ಭೇಟಿಯಲ್ಲೇ ಅವರ ಮಾತುಕತೆ ಸರಳತೆ ಹಾಗೂ ಸಂಸ್ಥೆಯೊಂದಿಗೆ ಹೊಂದಿರುವ ನಿಕಟ ಸಂಪರ್ಕ ಇವೆಲ್ಲವೂ ಗೋಚರವಾಗುತ್ತಿತ್ತು.ಬಳಿಕ ಹಲವು ಬಾರಿ ದಾರುನ್ನೂರ್ ಸಂದರ್ಶನ ಹಾಗೂ ರಾಷ್ಟ್ರೀಯ ಸಮಿತಿಯ ಕಾರ್ಯಕ್ರಮದ ಪತ್ರಿಕಾ ಪ್ರಕಟಣೆಗಳಲ್ಲಿ ಇವರ ಲವಲವಿಕೆ ಮತ್ತು ಹುರುಪನ್ನು ಗಮನಿಸುತ್ತಿದ್ದೆ.ಶೈಖುನಾ ತ್ವಾಖಾ ಉಸ್ತಾದರು ಅನಾರೋಗ್ಯದಿಂದ ಚಿಕಿತ್ಸೆ ಪಡೆಯಲು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾದ ವೇಳೆ ಇವರು ಸಂದರ್ಶನಕ್ಕಾಗಿ ಬಂದಿದ್ದರು.ಇದಾದ ಎರಡು ದಿನದ ಬಳಿಕ ರಫೀಕಾಕ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ವಾರ್ತೆ ಕೇಳಿ ಆಘಾತವಾಯಿತು.
ತನಗೆ ಅಂಟಿದ ರೋಗದ ಬಗ್ಗೆ ಹಾಗೂ ಅದರ ನೋವನ್ನು ಸಹಿಸುವ ವೇಳೆಯಲ್ಲೂ ಅಲ್ಲಾಹನ ಮೇಲೆ ಭರವಸೆಯನ್ನಿಟ್ಟು ದುಆ ಮೂಲಕ ನನಗೆ ಸಹಕಾರ ನೀಡುವಂತೆ ಕೇಳುವಂತಿತ್ತು ಅವರ ಮಾತುಗಳು.ಎಲ್ಲವೂ ಅಲ್ಲಾಹನ ಇಚ್ಛೆ…ಇದಾದ ಬಳಿಕ ಸ್ವಲ್ಪ ಚೇತರಿಕೆಯನ್ನು ಕಂಡಿದ್ದರು.ನಾಲ್ಕು ತಿಂಗಳ ಹಿಂದೆಯಷ್ಟೇ ನನ್ನ ಮದುವೆಗೆ ಆಮಂತ್ರಣವನ್ನು ನೀಡಿದ ವೇಳೆ ಅಲ್ ಹಮ್ದುಲಿಲ್ಲಾಹ್ ಎಲ್ಲವೂ ಸುಸೂತ್ರವಾಗಿ ನಡೆಯಲಿ, ಹೊರಗಿನ ಕಾರ್ಯಕ್ರಮಗಳಿಗೆ ಹೋದಲ್ಲಿ ಅನಾರೋಗ್ಯದಲ್ಲಿ ಏರುಪೇರಾಗುತ್ತದೆ ಎಂಬ ಭಯವಿದೆ ಎಂದು ಹೇಳಿ ದುಆ ಮಾಡಿದ ಸನ್ನಿವೇಶ ಈಗಲೂ ಮರೆಯಲಾಗುತ್ತಿಲ್ಲ.
ಅದೇನೋ ಅವರ ವ್ಯಕ್ತಿತ್ವದ ಹಿರಿಮೆಯೇನೋ ಗೊತ್ತಿಲ್ಲ! ವಿವಾಹದ ಮೊದಲನೇ ವಾರದಲ್ಲೇ ಅವರನ್ನು ಭೇಟಿಯಾಗಲು ನನ್ನವಳೊಂದಿಗೆ ತೆರಳಿದೆ.ಸಲಾಂ ಹೇಳಿ ಕುಶಲೋಪಚರಿ ನಡೆಸಿ ಹೇಳಿದರು” ನೀವು ನನ್ನನ್ನು ಸಂದರ್ಶಿಸಲು ಬರುವಿರೆಬುವುದು ನನಗೆ ತಿಳಿದಿತ್ತು”. ಬಳಿಕ ನಡೆದ ಸಂಭಾಷಣೆಯೆಲ್ಲವೂ ದಾರುನ್ನೂರಿನ ಏಳಿಗೆ ಇನ್ನಷ್ಟು ಕ್ರಮಿಸಬೇಕಾದ ದೂರ ವಿಶ್ವವಿದ್ಯಾಲಯವಾಗಿ ದಾರುನ್ನೂರ್ ಹೊರ ಹೊಮ್ಮಬೇಕೆಂಬ ಕನಸು ಇವೆಲ್ಲವೂ ಅರ್ಧ ಗಂಟೆಯ ಮಾತುಕತೆಯಲ್ಲಿ ಅಡಗಿತ್ತು.ಹೆಚ್ಚು ಮಾತನಾಡಿ ಅವರಿಗೆ ತೊಂದರೆ ನೀಡದಿರಲೆಂದು ಆದಷ್ಟು ಬೇಗ ಹಿಂದಿರುಗಲು ಆತುರಪಟ್ಟರೂ ಇನ್ನಷ್ಟು ಹೊತ್ತು ಹುರುಪಿನಿಂದಲೇ ದಾರುನ್ನೂರಿನ ಬಗ್ಗೆ ಮಾತನಾಡುತ್ತಿದ್ದರು.ಮಾತುಕತೆಯ ಮಧ್ಯೆ ಜನರು ನೀಡಿದ ಜವಾಬ್ದಾರಿಗಳು ಇನ್ನೂ ಉಳಿದಿದೆ, ರಾಜೀನಾಮೆ ನೀಡಲು ಮುಂದಾದರೂ ಸ್ವೀಕಾರ ಮಾಡುತ್ತಿಲ್ಲ, ಅಲ್ಲಾಹನು ಜವಾಬ್ದಾರಿಯನ್ನು ನಿಭಾಯಿಸದ ಬಗ್ಗೆ ನನ್ನಲ್ಲಿ ಕೆಳದಿರುವನೇ?? ಎನ್ನುವಾಗ ಅವರ ಶಬ್ದ ಕಂಪಿಸುತ್ತಿತ್ತು.ನನ್ನಿಂದಾಗುವ ಸಾಂತ್ವನವನ್ನು ನೀಡಿ ಸಲಾಂ ಹೇಳಿ ಹಿಂದಿರುಗಿದೆ.
ಅಲ್ಲಾಹನ ಬಗ್ಗೆ ಭಯ-ತನ್ನ ಹೆಗಲ ಮೇಲಿರುವ ಜವಾಬ್ದಾರಿಯ ಬಗೆಗಿನ ಆತಂಕ ಇವೆಲ್ಲವೂ ನಾಯಕನೆನಿಸಿಕೊಂಡವರಿಗೆ ಅವರ ಜೀವನವೇ ಕೈಗನ್ನಡಿ.ಇತ್ತೀಚಿಗೆ ಸಾಮಾಜಿಕ ಕಾರ್ಯಕರ್ತ ಝಇನ್ ಆತೂರು ಇವರೊಂದಿಗೆ ದಾರುನ್ನೂರಿಗೆ ಕಾರಿನಲ್ಲಿ ಒಮ್ಮೆ ಜೊತೆಯಾಗಿ ಹೋಗೋಣ ಎಂದಿದ್ದರಂತೆ.ಶೈಖುನಾ ತ್ವಾಖಾ ಉಸ್ತಾದರನ್ನು ಹಾಗೂ ಅವರು ನೇತೃತ್ವ ನೀಡುವ ಸಂಸ್ಥೆಯೊಂದಿಗೆ ಅಪಾರ ಗೌರವವನ್ನಿಟ್ಟಿದ್ದ ಮಾರ್ಹೂಂ ರಫೀಖ್ ಇವರ ಮೂರನೇ ದುಆದ ಪ್ರಯುಕ್ತ ಇಂದು ದಾರುನ್ನೂರ್ ಸಂಸ್ಥೆಯಲ್ಲಿ ಆಯೋಜಿಸಲ್ಪಟ್ಟ ಪ್ರಾರ್ಥನಾ ಕೂಟದಲ್ಲಿ ಪ್ರಾಂಶುಪಾಲರು ಹಾಗೂ ಹುಸೈನ್ ರಹ್ಮಾನಿಯಾವರ ಅನುಸ್ಮರಣಾ ಭಾಷಣವನ್ನು ಕೇಳಿ ಏನೋ ಒಂದು ಆಘಾತವೆರಗಿದಂತೆ ಸಭೆಯಲ್ಲಿ ಸೇರಿದವರೆಲ್ಲರೂ ಮೂಕತಾಭಾವದಲ್ಲಿದ್ದರು.
ಅಲ್ಲಾಹನ ಅನುಲ್ಲಂಘನೀಯ ನಿಯಮದಂತೆ ಅವರು ಅಲ್ಲಾಹನೆಡೆಗೆ ಯಾತ್ರೆಯಾದರೂ ಅಲ್ಲಾಹನ ಬಳಿ ಉತ್ತರಿಸಲು ಅವರ ಬಳಿ ಪುರಾವೆಗಳಿವೆ.ಕೌಟುಂಬಿಕ ಶುಭ ಸಮಾರಂಭವನ್ನು ಆದಷ್ಟು ಚಟುಕುಗೊಳಿಸಿ ಇತರರ ನೋವಿಗೆ ಮಿಡಿದು ಸಂಪತ್ತನ್ನು ವ್ಯಯಿಸಿದ ಇವರು ಅಲ್ಲಾಹನು ನಿನ್ನ ಆಯುಷ್ಯ ಮತ್ತು ಸಂಪತ್ತನ್ನು ಯಾವುದರಲ್ಲಿ ವ್ಯಯಿಸಿದ್ದೀಯಾ ಎಂಬ ಪ್ರಶ್ನೆಗೆ, ಹೆಮ್ಮೆಯಿಂದ 90 ರ ದಶಕದಲ್ಲಿ ಪ್ರಾರಂಭವಾದ ತನ್ನ ಸಮಾಜ ಸೇವೆಯ ಪುಸ್ತಕವನ್ನು ತೆರೆದಿಡುವರು.ಅಲ್ಲಾಹು ಮರ್ಹೂಂ ರಫೀಖ್ ಆತೂರು ಇವರ ಸ್ಥಾನವನ್ನು ಉನ್ನತಗೊಳಿಸಲಿ.ಪಾಪಗಳನ್ನು ಮನ್ನಿಸಿ ಸತ್ಕರ್ಮಗಳನ್ನು ಇಮ್ಮಡಿಗೊಳಿಸಲಿ,ಸ್ವರ್ಗಲೋಕದ ಸರ್ವ ಐಶ್ವರ್ಯವನ್ನು ಅವರಿಗೂ ನಮಗೂ ಕರುಣಿಸಲಿ ಆಮೀನ್.
-Mueenuddeen Hudawi Bandadi