ಜಾತ್ಯಾತೀತ ಮತ್ತು ಧಾರ್ಮಿಕ ಮಟ್ಟದಲ್ಲಿ ಅತ್ಯಂತ ಯಶಸ್ವಿಯಾದ ಓರ್ವ ನಾಯಕರಾಗಿದ್ದರು ಪ್ರವಾದಿ ಪೈಗಂಬರ್ ಮುಹಮ್ಮದ್ (ಸ.ಅ). ಅವರು ರೂಢಿಸಿಕೊಂಡ ಸದ್ಗುಣಗಳು ಅನೇಕ ಜನರಿಗೆ ಇಸ್ಲಾಂ ಧರ್ಮ ಸ್ವೀಕರಿಸಲು ಮುಖ್ಯ ಕಾರಣವಾಗಿತ್ತು. ಪ್ರವಾದಿಯವರ ನಾಯಕತ್ವದ ಪ್ರಭಾವ ಇಂದಿಗೂ ಕೊನೆಗೊಳ್ಳದೆ ಪ್ರಸ್ತುತ ಕಾಲಮಾನದಲ್ಲಿ ಸೂಕ್ತ ಮಾದರಿಯಾಗಿ ಉಳಿದಿದೆ.
ಸಹನೆ
ಪ್ರವಾದಿಯವರನ್ನು ಈ ಲೋಕಕ್ಕೆ ಸಹನೆ, ಕರುಣೆಯೊಂದಿಗಲ್ಲದೆ ಕಳುಹಿಸಲಿಲ್ಲ ಎಂಬ ಕುರ್ಆನ್ ವಾಕ್ಯ ವ್ಯಕ್ತ. ವಾಸ್ತವದಲ್ಲಿ ಪ್ರವಾದಿ(ಸ.ಅ)ರು ಶಾಂತಿ ಮತ್ತು ಸಹನೆಯ ಸಂಕೇತವಾಗಿದ್ದರು. ಯಾರಾದರು ತಪ್ಪಾಗಿ ನಡೆದುಕೊಂಡರೆ ಅವರನ್ನು ಕ್ಷಮಿಸಿ ದ್ವೇಷವಿಲ್ಲದೆ ಸಭ್ಯ ಭಾವನೆಯೊಂದಿಗೆ ಸುಖಾಂತ್ಯಗೊಳಿಸುತ್ತಿದ್ದರು. ಯಹೂದಿ ಮಹಿಳೆಯೊಮ್ಮೆ ಪ್ರವಾದಿ (ಸ.ಅ) ರವರನ್ನು ವಿಷಪೂರಿತ ಆಹಾರ ನೀಡಿ ಹತ್ಯೆಮಾಡಲು ಯತ್ನಿಸಿದ್ದು, ಅವಳ ಕೃತ್ಯವನ್ನು ಅರಿತ ಪೈಗಂಬರರು ಅವಳನ್ನು ಶಿಕ್ಷಿಸದೆ ಕ್ಷಮಿಸಿದ್ದಾರೆಂದು ಅನಸ್ (ರ) ರವರು ಉಲ್ಲೇಖಿಸಿದ್ದಾರೆ.
ಬಡವರ ಮೇಲೆ ಕಾಳಜಿ
ಪೈಗಂಬರರು ಸ್ವತಃ ಅತ್ಯಂತ ಕರುಣೆ ಹಾಗೂ ಸಹನಾಶೀಲವುಳ್ಳ ನಾಯಕರಾಗಿ ಬಡವರ ಮತ್ತು ಅರ್ಹರ ಬಗ್ಗೆ ಕಾಳಜಿಯನ್ನು ವಹಿಸಲು ತಮ್ಮ ಸಮುದಾಯಕ್ಕೆ ಬೋಧಿಸಿದ್ದಾರೆ. ಪ್ರವಾದಿ (ಸ.ಅ) ರವರು ಯಾವುದೇ ಸಂಪತ್ತನ್ನು ತನ್ನದಾಗಿಸಿರಲಿಲ್ಲ, ತನ್ಇಹಲೋಕ ವಾಸದ ಬಳಿಕ ಉಳಿದ ಸಂಪತ್ತನ್ನು ಬಡವರಿಗೆ ವಿತರಿಸಬೇಕೆಂಬ ಸೂಚನೆ ನೀಡಿದ್ದಾರೆ– ನ್ನನ ಆಸ್ತಿಯ ಒಂದು ದೀನಾರನ್ನೂ ವಿತರಿಸಬೇಕು–ಎಂಬ ಹದೀಸನ್ನು ಬುಖಾರಿ ಇಮಾಮ್ ಉಲ್ಲೇಖಿಸಿದ್ದಾರೆ.
ವಿಶ್ವಾಸಾರ್ಹತೆ
ಪವಿತ್ರ ಪ್ರವಾದಿಯವರನ್ನು ಸ್ವಾದಿಕ್ ಮತ್ತು ಅಲ್–ಅಮೀನ್ ಎಂದು ಕರೆಯಲಾಗುತ್ತಿತ್ತು. ಕಿರುಪ್ರಾಯದಲ್ಲೇ ಎಲ್ಲರಿಗೂ ಅವರು ಸಂಪೂರ್ಣ ನಂಬಲರ್ಹ ಎಂದು ತಿಳಿದಿತ್ತು. ಪ್ರವಾದಿ (ಸ.ಅ) ರವರು –ಸಫ– ಬೆಟ್ಟವನ್ನು ಹತ್ತಿ ಬೋಧನೆಯ ಮೊದಲ ಹಂತ ಖುರೈಶುಗಳ ಗಮನ ಸೆಳೆದಾಗ– ಈ ಬೆಟ್ಟದ ಹಿಂಭಾಗದಲ್ಲಿ ನಿಮ್ಮ ಮೇಲೆ ದಾಳಿ ಮಾಡಲು ಕುದುರೆ ಸವಾರರು ನಿಂತಿದ್ದಾರೆ, ಎಂದರೆ ನೀವು ನನ್ನನ್ನು ನಂಬುವಿರೇ ? – ಹೌದು ನಾವು ನಿಮ್ಮನ್ನು ಎಂದಿಗೂ ಸುಳ್ಳೆಂದು ತಿಳಿದಿಲ್ಲ – ಎಂದು ಜನರು ಉತ್ತರಿಸಿದರು ಎಂಬ ಇಬ್ನ್ ಅಬ್ಬಾಸ್ (ರ) ಅವರ ವರದಿಯಿದೆ.
ಪ್ರವಾದಿಯವರು ಆತ್ಮ ವಿಶ್ವಾಸ, ಸಹನೆ, ಕಾಳಜಿಯೊಂದಿಗೆ ದೃಢನಿರ್ಧಾರವನ್ನು ಹೊಂದಿದ್ದ ಮಾದರಿ ನಾಯಕರಲ್ಲಿ ಶ್ರೇಷ್ಠರಾಗಿದ್ದರು. ಮನುಷ್ಯತ್ವ, ದೃಢನಾಯಕತ್ವ ಹಾಗೂ ಸರಿಸಾಟಿಯಿಲ್ಲದ ಸಮಾಜ ಸುಧಾರಕರೂ ಆಗಿದ್ದರು. ತನ್ನ ಸಹಚರರ ಹಾಗೂ ಮುಂದಿನ ಪೀಳಿಗೆಯ ಪ್ರಗತಿ ಹಾಗೂ ಸುಖಕ್ಕಾಗಿ ಕಠೋರತೆಯನ್ನು ತನ್ನ ಹೆಗಲ ಮೇಲೆ ಹೊತ್ತು ಇಸ್ಲಾಮನ್ನು ಜನರಿಗೆ ಬೋಧಿಸಿದರು. ತಮ್ಮ ಬಳಿ ಅಂಗಲಾಚಿದವರಿಗೆ ಸಹಾಯ ಮಾಡಿ ವಿವೇಚನೆಯನ್ನು ತೋರಿಸದೆ ಹಿಂಸೆಯನ್ನು ವಿರೋಧಿಸಿ ಶಾಂತಿಯ ಮಂತ್ರವನ್ನು ಮೊಳಗಿಸಿದರು.ಪುಣ್ಯ ಹಬೀಬರ ರೌಲಾ ಕಾಣಲು ಅಲ್ಲಾಹನು ನಮಗೆಲ್ಲರಿಗೂ ಭಾಗ್ಯವನ್ನು ಕರುಣಿಸಲಿ–ಆಮೀನ್
— Author —