ಅಲ್ಲಾಹನು ಪ್ರವಾದಿ ﷺ ರವರನ್ನು ಅರಬಿಯಾ ದೇಶದ ಮುಖಂಡರಾಗಿಯೋ ಮೇಧಾವಿಯಾಗಿ ನೇಮಿಸಿದ್ದಲ್ಲ ಬದಲಾಗಿ ಪ್ರವಾದಿಯನ್ನು ಒಬ್ಬ ಮಹಾ ಮಾನವತಾವಾದಿಯಾಗಿ ಆಗಿತ್ತು.ಮಾತ್ರವಲ್ಲ ಪ್ರವಾದಿಯವರು ಮನುಕುಲಕ್ಕೆ ದೊರೆತ ಒಬ್ಬ ಆದರ್ಶ ವ್ಯಕ್ತಿಯೆಂದೂ ತಿಳಿಯುವುದು ಹೆಚ್ಚು ಸಮಂಜಸ. ಇದು ನನ್ನ ಬರಹವಲ್ಲ ಇತಿಹಾಸ ಪುಟಗಳಲ್ಲಿ ಇತಿಹಾಸದ ಘಟಾನುಗಟಿ ನಾಯಕರು ಸುಂದರವಾಗಿ ವರ್ಣಿಸಿರುವ ವಿಷಯ.
“ಮಾನವ ಜನ್ಮ ಬಲು ದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ” ಎಂದು ಕನ್ನಾಡಿನ ದಾಸವರೇಣ್ಯರು ಹದಿನಾರನೇಯ ಶತಮಾನದಲ್ಲಿ ನುಡಿದಿದ್ದಾರೆ. ಆದರೆ ಅವರಿಗಿಂತ ಪೂರ್ವದಲ್ಲಿಯೇ ಪ್ರವಾದಿ ﷺರವರು ಮದೀನ ಮಸೀದಿಗಳ ಗೋಡೆಗಳ ಮಧ್ಯೆ ತನ್ನ ಅನುಚರರರಿಗೆ ತಿಳಿಸಿದ್ದಾರೆ. ಅವರು “ತಾರುಣ್ಯವನ್ನು ವೃದ್ಧಾಪ್ಯಕ್ಕಿಂತ ಮೊದಲು, ಆರೋಗ್ಯವನ್ನು ಅನಾರೋಗ್ಯಕ್ಕಿಂತ ಮೊದಲು, ಶ್ರೀಮಂತಿಕೆಯನ್ನು ದಾರಿದ್ರ್ಯಕ್ಕಿಂತ ಮೊದಲು, ಬಿಡುವನ್ನು ನಿಬಿಡತೆಗಿಂತ ಮೊದಲು ಮತ್ತು ಜೀವನವನ್ನು ಮರಣಕ್ಕಿಂತ ಮೊದಲು ಸದುಪಯೋಗಪಡಿಸಿಕೊಳ್ಳಿರಿ’ ಎನ್ನುತ್ತಿದ್ದರು.
ಕರುಣೆಯ ಹರಿಕಾರ ಅಂತ್ಯ ಪ್ರವಾದಿ ಲೋಕ ನಾಯಕರಾದ ಮುಹಮ್ಮದ್ ﷺ ರವರು ಕಲಿಸಿ ಕೊಟ್ಟಂತಹ ಪಾಠ ಶಾಂತಿಯ ಸಮಾಧಾನದ ಸಹಬಾಳ್ವೆಯ ಮಾದರಿಯುತ ಆದರ್ಶ ಜೀವನವನ್ನಾಗಿದೆ.ಒಂದೊಂದು ಒಳ್ಳೆಯ ಕಾರ್ಯವು ದಾನದ ಪ್ರತಿಫಲಕ್ಕೆ ಸಮಾನ.ಸಹೋದರನನ್ನು ಕಂಡಾಗ ನಸು-ನಗುವುದು ಕೂಡಾ ಪುಣ್ಯ ಕಾರ್ಯ. ಪ್ರತಿಯೊಂದು ಸತ್ಕರ್ಮವು ಸ್ವರ್ಗಕ್ಕಿರುವ ಮೆಟ್ಟಿಲುಗಳಾಗಿವೆ ಎಂದು ಪ್ರವಾದಿﷺ ನುಡಿಯುತ್ತಾರೆ.
ಒಂದು ಸವಿನುಡಿ ಮತ್ತು ಕ್ಷಮಾಗುಣವು ಮನನೋಯಿಸುವ ದಾನಕ್ಕಿಂತ ಉತ್ತಮ ಎಂದು ಪರಿಶುದ್ಧ ಖುರ್ ಆನ್ ತಿಳಿಸುತ್ತದೆ.
ದಾರಿತಪ್ಪದವರಿಗೆ ಸರಿಯಾದ ದಾರಿಯಲ್ಲಿ ತೋರಿಸುವುದು ಒಂದು ದಾನವಾಗಿದೆ.ಕುರುಡನಿಗೆ ನಡೆಯಲು ಸಹಾಯ ಮಾಡುವುದು ದಾನವಾಗಿದೆ.ರಸ್ತೆಯಲ್ಲಿರುವ ಕಲ್ಲು ಮುಳ್ಳು ಅಥವಾ ಇನ್ನಿತರ ಅಡೆತಡೆಗಳನ್ನು ನಿವಾರಿಸಿ ನಡೆದಾಡಲು ಸೌಕರ್ಯ ಒದಗಿಸುಯಿಕೊಡುವುದು ದಾನವಾಗಿದೆ.ಬಾಯಾರಿದವನಿಗೆ ನೀರು ಕೋಡುವುದು ದಾನವಾಗಿದೆ.
ಪರಲೋಕದಲ್ಲಿ ಓರ್ವ ವ್ಯಕ್ತಿಯ ನಿಜವಾದ ಆಸ್ತಿಯೆಂದರೆ ಇಹಲೋಕದಲ್ಲಿ ಆತನು ಇತರರಿಗೆ ಮಾಡಿದ ಒಳ್ಳೆಯ ಕೆಲಸವಾಗಿದೆ.ಆತನು
ಮರಣ ಹೊಂದಿದಾಗ ಮನುಷ್ಯರು ಕೇಳುತ್ತಾರೆ “ಅವನೆಷ್ಟು ಆಸ್ತಿಯನ್ನು ಬಿಟ್ಟು ಹೋಗಿದ್ದಾನೆ” ಆದರೆ ದೇವದೂತರು(ಮಲಕುಗಳು) ಕೇಳುತ್ತಾರೆ “ಪರಲೋಕದಲ್ಲಿ ತನ್ನ ಆಗಮನಕ್ಕಿಂತ ಮುಂಚಿತವಾಗಿ ಆತನು ಏನು ಪುಣ್ಯ ಕರ್ಮಗಳನ್ನು ಕಳುಹಿಸಿಕೊಟ್ಟಿದ್ದಾನೆ ಎಂಬುವುದಾಗಿದೆ ಲೋಕ ನಾಯಕರ ನುಡಿ.
ಆತ್ಮೀಯರೇ ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಹುಟ್ಟು ಸಾವಿನ ನಡುವೆ ಇರುವ ನಾಲ್ಕು ದಿನಗಳಲ್ಲಿ ನಮ್ಮ ಬದುಕು ಸಾರ್ಥಕವಾಗಬೇಕು. ಆ ಬದುಕು ಸಾರ್ಥಕತೆಯನ್ನು ಕಾಣಬೇಕಾದರೆ ನಾವೇನು ಮಾಡಬೇಕು.
ಕೆಲವರು ಸತ್ತು ಬದುಕುತ್ತಾರೆ.ಇನ್ನು ಕೆಲವರು ಬದುಕಿದ್ದರೂ ಸತ್ತಂತೆ ಇರುತ್ತಾರೆ. ನಾವು ನಮಗಾಗಿ ಮಾತ್ರ ಬದುಕಬಾರದು. ಇತರರಿಗಾಗಿ ಬದುಕಬೇಕಾಗಿದೆ.
ಕೇವಲ ನಮ್ಮ ಸುಖ ಸಂತೋಷ ಶ್ರೇಯಸ್ಸು ಮತ್ತು ಬೆಳವಣಿಗೆಯನ್ನು ಮಾತ್ರ ಬಯಸದೆ ಅವೆಲ್ಲವೂ ಇತರರಿಗೂ ಸಿಗಲಿ ಎಂಬ ಹಾರೈಕೆ ಪ್ರಾರ್ಥನೆ ಮತ್ತು ಪ್ರಯತ್ನ ನಮ್ಮದಾಗಿರಬೇಕು.
“ನೀನು ಸ್ವಂತಕ್ಕಾಗಿ ಬಯಸುವುದನ್ನು ನಿನ್ನ ಸಹೋದರನಿಗಾಗಿ ಬಯಸುವ ತನಕ ನೀನು ಪರಿಪೂರ್ಣ ಸತ್ಯವಿಶ್ವಾಸಿಯಾಗಲಾರೆ ಎಂದು ಪೈಗಂಬರ್ ಮಹಮ್ಮದ್ ಮುಸ್ತಫಾ ﷺ ಹೇಳುತ್ತಾರೆ.ಜನರ ಮೇಲೆ ಯಾರು ಕರುಣೆ ತೋರುವುದಿಲ್ಲವೋ ಅವರ ಮೇಲೆ ಅಲ್ಲಾಹನು ಕರುಣೆ ತೋರುವುದಿಲ್ಲವೆಂದು ತಿಳಿಸಿದ ಪ್ರವಾದಿ ﷺರವರು ಮಾನವೀಯತೆಯ ಮೌಲ್ಯವನ್ನು ಕಲ್ಪಿಸುತ್ತಾರೆ.ನಿಮ್ಮ ಜೊತೆ ಉತ್ತಮವಾಗಿ ವರ್ತಿಸುವವರ ಜೊತೆ ಉತ್ತಮವಾಗಿ ವರ್ತಿಸುವುದಷ್ಟೇ ಅಲ್ಲ, ನಿಮ್ಮ ಜೊತೆ ಕೆಟ್ಟದಾಗಿ ವರ್ತಿಸುವವರ ಜೊತೆಯೂ ನೀವು ಉತ್ತಮವಾಗಿ ವರ್ತಿಸಿರಿ’ ಎಂಬ ಪ್ರವಾದಿ ಮಾತು ಎಷ್ಟು ಸುಂದರವಾಗಿದೆ. ಈ ಸೃಷ್ಟಿಯಲ್ಲಿರುವ ಯಾವ ವಸ್ತುಗಳನ್ನು ಯಾರೂ ಮನಬಂದಂತೆ ಬಳಸಿಕೊಳ್ಳಬಾರದು, ತನಗೆ ಧರ್ಮಬದ್ಧವಾದ ವಸ್ತುವನ್ನು, ಧರ್ಮಬದ್ಧವಾದ ಉದ್ದೇಶಕ್ಕಾಗಿ, ಧರ್ಮಬದ್ಧ ವಿಧಾನದಿಂದ ಬಳಸಿಕೊಳ್ಳಬೇಕು ಎಂಬ ನುಡಿ, ಇಂದು ಅಕ್ರಮ ಗಳಿಕೆಯ ಮೂಲಕ ಜೈಲು ಸೇರುವವರಿಗೇ ಹೇಳಿದಂತಿದೆಯಲ್ಲವೆ? ಒಂದು ಪ್ರಾಣಿಯಿರಲಿ, ಪಕ್ಷಿಯಿರಲಿ, ಅಷ್ಟೇ ಏಕೆ ಗಿಡ ಮರಗಳಿಗೆ ಅನಗತ್ಯವಾಗಿ ಹಾನಿಯುಂಟು ಮಾಡಿದರೆ ಅದು ಪರಲೋಕದಲ್ಲಿ ವಿಚಾರಣಾರ್ಹವಾದ ಮತ್ತು ಶಿಕ್ಷಾರ್ಹವಾದ ಅಪರಾಧವಾಗಿದೆ ಎಂದಿರುವುದು ಅಕ್ರಮಗಳಿಗೆ ಬೇಲಿ ಹಾಕಿದಂತೆಯಲ್ಲವೇ.
ಪ್ರವಾದಿಯ ಜೀವನ ಸಮಾಜಕ್ಕೆ ಮಾದರಿ:
ಜನರೆಡೆಯಲ್ಲಿನ ಬೇಧ-ಭಾವನೆ
ಶ್ರೀಮಂತಿಕೆಯೇಂಬುದು ಸಂಪತ್ತಿನ ಆಧಿಕ್ಯದ ಹೆಸರಲ್ಲ, ಮನಸ್ಸಿನ ಶ್ರೀಮಂತಿಕೆಯೇ ನಿಜವಾದ ಶ್ರೀಮಂತಿಕೆ’, ‘ಕಾರ್ಮಿಕನ ಬೆವರು ಆರುವುದಕ್ಕೆ ಮುಂಚೆ ಅವನಿಗೆ ಅವನ ವೇತನವನ್ನು ಕೊಟ್ಟು ಬಿಡಿರಿ’, ‘ಹಿರಿಯರನ್ನು ಗೌರವಿಸದವನು, ಕಿರಿಯರ ಮೇಲೆ ವಾತ್ಸಲ್ಯ ತೋರದವನು, ಒಳಿತಿನ ಪ್ರಚಾರ ಮಾಡದವನು ಮತ್ತು ಕೆಡುಕಿನಿಂದ ಜನರನ್ನು ತಡೆಯದವನು ನಮ್ಮವನಲ್ಲ’ ಇವು ಕೆಲವು ಉದಾಹರಣಗಳಷ್ಟೇ…
ಅಮಲು ಪಧಾರ್ಥ & ಕೆಡುಕಿನ ವಿರುದ್ಧ:
ಪ್ರವಾದಿವರ್ಯರ ವಿಚಾರಧಾರೆಗಳು ಮತ್ತು ಅವರು ಕೈಗೊಂಡ ಕಾರ್ಯಗಳು ಮಾದರಿ ಸಮಾಜ ನಿರ್ಮಾಣಕ್ಕೆ ಅತ್ಯಗತ್ಯ. ಯಾವ ಸಮಾಜದಲ್ಲಿ ಸರಕಾರ ಮಾತ್ರವಲ್ಲದೆ ಜನತೆ ಕೂಡ ಪರಸ್ಪರರನ್ನು ಸತ್ಕಾರ್ಯ ಮಾಡುವಂತೆ ಪ್ರೇರೇಪಿಸುವರೋ ಮತ್ತು ಕೆಡುಕುಗಳಿಂದ ತಡೆಯುವರೋ ಅಂತಹ ಸಮಾಜವು ಆದರ್ಶ ಸಮಾಜವಾಗುವುದೆಂದು ಪ್ರವಾದಿﷺಸಾರಿ ಹೇಳುತ್ತಾರೆ. ಶರಾಬು ಸೇವನೆಯನ್ನು ವಿರೋಧಿಸಿದ ಆ ವಸ್ತು ಸಮಾಜದೊಳಗೆ ಪ್ರವೇಶಿಸಲು ಇರುವ ದ್ವಾರಗಳನ್ನು ಮುಚ್ಚಿಬಿಟ್ಟರು. ಶರಾಬು ಕುಡಿಯುವುದನ್ನು ಮಾತ್ರವಲ್ಲದೆ ಶರಾಬು ತಯಾರಿಸುವುದನ್ನು, ಮಾರುವುದನ್ನು, ಅದರ ಪ್ರಚಾರ ಮಾಡುವುದನ್ನು ನಿಷೇಧಿಸಿದರು. ಅನ್ಯಾಯದ ವಿಷಯದಲ್ಲಿ ತನ್ನ ಮಗಳಾದರೂ ಶಿಕ್ಷೆ ವಿಧಿಸಿಯೇ ತೀರುತ್ತೇನೆಂಬ ಸಮಾನತೆಯ ನೀತಿಯನ್ನು ಪ್ರವಾದಿಯು ಭೋಧಿಸುತ್ತದೆ.ಜಾತಿ – ಧರ್ಮವನ್ನು ನೋಡಲಿಲ್ಲ. ವರ್ತಮಾನದಲ್ಲಿ ಇಂತಹ ವರ್ತನೆಗಳು ಹೆಚ್ಚಾಗಿವೆ. ಅಪರಾಧಿಯು ತಮ್ಮ ಕುಲ, ಜಾತಿ, ಧರ್ಮ, ಪಕ್ಷಕ್ಕೆ ಸೇರಿದವನು ಎಂಬ ಕಾರಣದಿಂದ ಬೆಂಬಲಿಸುವ ಪ್ರವೃತ್ತಿ ಬೆಳೆಯುತ್ತಲಿದೆ. ಅರಿವಿನ ಉತ್ತುಂಗದಲ್ಲಿರುವವರೇ ಈ ವಿಷಯದಲ್ಲಿ ಹಿಂದೆ ಬಿದ್ದಿರುವುದೆಂಬುದು ವಿಷಾದನೀಯ ಸಂಗತಿ.
ವ್ಯಪಾರದಲ್ಲಿನ ನ್ಯಾಯ:
ಒಮ್ಮೆ ಪೈಗಂಬರರು ಪೇಟೆಯಿಂದ ಹಾದುವಾಗ ಅಲ್ಲಿದ್ದ ಧಾನ್ಯ ರಾಶಿಯೊಳಗೆ ಕೈ ಹಾಕಿದಾಗ ಧಾನ್ಯ ಒದ್ದೆಯಾಗಿರುವುದನ್ನು ಕಂಡು ಇದೇನೆಂದು ವಿಚಾರಿಸಿದರು. ರಾತ್ರಿ ಮಳೆ ಬಂದಿದ್ದರಿಂದ ಒದ್ದೆಯಾಯಿತೆಂದು ಹೇಳಲಾಗುತ್ತದೆ. ಪೈಗಂಬರರು ಅದನ್ನು ಮೇಲ್ಬಾಗದಲ್ಲಿ ಏಕೆ ಹಾಕಲಿಲ್ಲವೆಂದು ಕೇಳಿದರು.’ ತರುವಾಯ ‘ವಂಚಿಸುವವರು ನಮ್ಮವರಲ್ಲ’ ವೆಂದು ಎಚ್ಚರಿಸಿ ವ್ಯಾಪಾರದಲ್ಲಿನ ನೀತಿ ಪಾಠವನ್ನು ತಿಳಿಸಿದರು.
ಪರಿಸರ & ಪ್ರಕೃತಿ ಸಂರಕ್ಷಣೆ:
ಪೃಕೃತಿ ಸಂರಕ್ಷಣೆಗೂ ಅತಿ ಮಹತ್ವವನ್ನು ಕೊಟ್ಟಿರುವುದು ಗಮನಿಸ ಬಹುದಾಗಿದೆ. ಮರಗಳನ್ನು ನೆಡುವುದು, ಅದಕ್ಕೆ ನೀರೆರೆಯುವುದೂ, ಅಂತ್ಯ ದಿನದಲ್ಲಿ ಕಹಳೆ ಊದುವ ಶಬ್ದ ಕೇಳಿದರೂ ಕೈಯಲ್ಲಿರುವ ಸಸಿಯನ್ನು ನೆಟ್ಟುಬಿಡು ಎಂದೂ ಪ್ರವಾದಿ ಹೇಳಿದ್ದಾರೆ.
ನಿಂತ ನೀರನ್ನು ಕೊಳಕಾಗಿಸಬಾದೆಂದೂ, ಮರಗಳ ಬುಡವನ್ನು ಮಾಲಿನ್ಯ ವಿಸರ್ಜನೆಯ ಸ್ಥಳವಾಗಿಸಬಾರದೆಂದೂ ತಾಕೀತು ಮಾಡಿದ್ದರು.
ಆರ್ಥಿಕ ಶೋಷಣೆಯ ವಿರುದ್ಧ:
ಓರ್ವ ವ್ಯಕ್ತಿಯನ್ನು ವಿನಾ ಕಾರಣ ಕೊಂದರೆ ಇಡೀ ಜನಾಂಗವನ್ನು ಕೊಂದಂತೆಯೂ ಓರ್ವನ ಪ್ರಾಣವನ್ನು ಉಳಿಸಿದರೆ ಇಡೀ ಜನಾಂಗವನ್ನೇ ಉಳಿಸಿದಂತೆಯೆನ್ನುವ ಪರಿಶುದ್ಧ ಖುರ್ ಆನಿನ ವಾಕ್ಯ ಮಾನವ ಪ್ರಾಣದ ಘನತೆಯನ್ನು ಮಾನವ ಹಕ್ಕನ್ನು ಪ್ರತಿಪಾದಿಸುತ್ತಾರೆ.
ಮದ್ಯಪಾನ, ಜೂಜಾಟಾದಿ ಚಟಗಳಲ್ಲಿ ಮುಳುಗಿದ್ದ ಒಂದು ಸಮಾಜವನ್ನು ಕೇವಲ 23 ವರ್ಷಗಳಲ್ಲೇ ಹಂತ ಹಂತವಾಗಿ ಕ್ರಾಂತಿಕಾರೀ ರೀತಿಯಲ್ಲಿ ಸುಸಂಸ್ಕೃತ ನಾಗರಿಕರನ್ನಾಗಿಸಿ ಬಿಟ್ಟರು. ಅನೈತಿಕತೆ, ಆರ್ಥಿಕ ಶೋಷಣೆ, ಅಸಮಾನತೆ ಮತ್ತು ಎಲ್ಲಾ ಬಗೆಯ ಮೂಢ ನಂಬಿಕೆಯನ್ನು ಹೋಗಲಾಡಿಸಿದರು.
ಒಟ್ಟಿನಲ್ಲಿ ಮತ ಧರ್ಮಗಳನ್ನು ಆಧಾರ ಮಾಡಿಕೊಂಡು ಮನುಷ್ಯ ಕೆಲ ಅನುಕೂಲ ಆಚಾರಗಳಿಂದ ಸ್ವಂತದ ಅಥವ ವೈಯಕ್ತಿಕ ಸಂತೃಪ್ತಿಯನ್ನಷ್ಟೇ ಮಾಡಿಕೊಂಡರೆ, ವಿಶ್ವವಿಮೋಚಕರು ಪ್ರತಿಪಾದಿಸುವ ಧರ್ಮ(ಜೀವನದ ಸಮಗ್ರ ಪದ್ಧತಿ) ಮಕ್ಕಾ-ಮದೀನದಿಂದ ಆರಂಭಿಸಿ ಒಂದು ಯಶಸ್ವೀ ನ್ಯಾಯಾಧಿಷ್ಟಿತ, ಮಾನವೀಯ, ಶಾಂತಿಯ ಸಮೃದ್ಧ ಸಾಮ್ರಾಜ್ಯವನ್ನು ಸ್ಥಾಪಿಸಿ ತೋರಿಸಿದರು. ನಂತರ ಅನುಚರರು ಅದನ್ನು ಪ್ರಾಯೋಗಿಕ ಹಾಗೂ ಮಾದರೀಯಗೊಳಿಸಿದರು. ಮಾನವನ ದಾಸ್ಯದಿಂದ ಮತ್ತು ಮಾನವ ಕೃತ ಸಿದ್ಧಾಂತಗಳಿಂದ ವಿಮೋಚಿಸಿ ನ್ಯೂನತೆಗಳಿಂದ ಅತೀತ ಎಲ್ಲರ ಎಲ್ಲದರ ಸೃಷ್ಟಿಸಿದಾತ ಒದಗಿಸಿದ ಪರಿಪೂರ್ಣ ಜೀವನ ಪದ್ಧತಿಯಿಂದ ಜನರನ್ನು ಯಶಸ್ವಿ ಗೊಳಿಸಿದರು. ಅನ್ಯಾಯದ, ಅಸಮಾನತೆಯ, ದ್ವೇಶದ, ಕ್ರೂರ ಆಡಳಿತ ವ್ಯವಸ್ಥೆಗೆ ನೆಮ್ಮದಿಯ ಪರ್ಯಾಯ ನೀಡಿದರು.ಸರ್ವ ಜನರಿಗೆ ಮತ್ತು ಎಲ್ಲಾ ಕಾಲಕ್ಕೆ ಹೊಂದುವ ಶಿಕ್ಷಣವಾಗಿತ್ತು ಪ್ರವಾದಿಯವರದ್ದು. ಆರ್ಥಿಕತೆ, ರಾಜಕೀಯಾದಿಗಳಲ್ಲಿ ಪೈಗಂಬರರ ಏನೆಲ್ಲಾ ಸೈಧ್ದಾಂತಿಕ ಮತ್ತು ವೈಚಾರಿಕ ಶಿಕ್ಷಣಗಳು ದೊರೆಯುತ್ತದೆಯೆಂದು ಅರಿಯುವುದು ಸಮಯೋಚಿತವಾಗಿದೆ.
ನಮ್ಮ ದೇಶಕ್ಕೆ ಕಂಡುಬರುವ ಭ್ರಷ್ಟಾಚಾರ, ಹೆಣ್ಣು ಮಕ್ಕಳ ಮೇಲಿನ ದೌಜನ್ಯ, ಆರ್ಥಿಕ ಶೋಷಣೆ, ದೇಶಕ್ಕೆ ಮಾರಕವಾಗಿರುವಂತಹ ಕೋಮುವಾದಗಳಿಗೆಲ್ಲಾ ಪೈಗಂಬರರ ಶಿಕ್ಷಣಗಳಲ್ಲಿ ಪರಿಹಾರ ಕಂಡುಕೊಳ್ಳ ಬಹುದು.
ಕೋಮುವಾದಿಯೂ ಕೋಮು ಪ್ರಚೋದಕನೂ ನಮ್ಮವನಲ್ಲ ಎಂದು ಸಾರಿ ಹೇಳಿದ ಮಾತು ಯೋಚನಾತೀತವಾಗಿದೆ.
ಪ್ರವಾದಿಗಳು ಕರ್ಮಯೋಗಿಗಳಾಗಿದ್ದರು. ನುಡಿದಂತೆ ತಪ್ಪದೆ ನಡೆಯುವುದು ಶಿಸ್ತಿನ ಭಾಗವಾಗಿತ್ತು. ಸಮಯವನ್ನು ಸರಿಯಾಗಿ ಉಪಯೋಗಿಸುವುದು ಪ್ರವಾದಿ ವಿಶೇಷತೆಗಳಲ್ಲಿ ಪಟ್ಟಿತ್ತು. ಕ್ಷಮೆ ಮತ್ತು ಸಂಯಮ ಪ್ರವಾದಿ ಜೀವನದ ಅತಿ ವಿಶೇಶ ಗುಣಗಳು.
ಬಡವರು, ದುರ್ಬಲರು, ಅಸಹಾಯಕರು,ಅನಾಥರು, ಕೈದಿಗಳಿಗೆ ಉಣಬಡಿಸುವವನೇ ಅಲ್ಲಾಹನ ದಾಸ ಎಂಬ ದಿವ್ಯ ಪಾಠವನ್ನು ಜನರಿಗೆ ನೀಡಿದರು. ಯಾರಾದರೂ ಹಸಿದಿರುವುದು ಗಮನಕ್ಕೆ ಬಂದರೆ ಹಸಿವು ನೀಗಿಸುವ ಹೊಣೆಯನ್ನು ಪ್ರವಾದಿಯವರು ವಹಿಸಿ ಕೊಳ್ಳುತ್ತಿದ್ದರು.
ಕ್ಷುಲ್ಲಕ ವಿಷಯವನ್ನು ಪ್ರತಿಷ್ಠೆ ಮಾಡಿಕೊಂಡು, ವರ್ಷಗಟ್ಟಲೇ ಯುದ್ದಗಳಲ್ಲಿ ತೊಡಗಿ ಸಾವಿರಾರು ಜನರನ್ನು ಸಾವಿಗೆ ಕಾರಣವಾಗುತ್ತಿದ್ದ ಉಭಯ ಗೋತ್ರಗಳನ್ನು ಒಂದಾಗಿಸಿದರು.
ಅನಾಥ ಮಕ್ಕಳೊಂದಿಗೆ ತಮ್ಮ ಮಕ್ಕಳು ಆಟವಾಡುತ್ತಿದ್ದರೆ, ತಮ್ಮ ಮಕ್ಕಳನ್ನು ಮಗನೇ ಎಂದು ಕರೆಯಬಾರದೆಂದೂ ತನ್ನ ಅನುಚರರಿಗೆ ಸೂಚಿಸಿದ್ದರು.ಪೈಗಂಬರರ ಕ್ರಮ ಸೇಡುತೀರಿಸುವುದರ ಬದಲು, ಕೇಡು ಬಗೆಯುವವರನ್ನು ಸುಧಾರಿಸುವುದಾಗಿದೆ. ಎಂತಹ ಪರಿಸ್ಥಿತಿಯಲ್ಲೂ ಸಂಘರ್ಷದ ಬದಲಿಗೆ ಗುಣಾತ್ಮಕ ಮತ್ತು ರಚನಾತ್ಮಕ ಹಾದಿ ಮಾತ್ರವೇ ಅವರದ್ದಾಗಿತ್ತು. ಪ್ರೀತಿ ಮೂಲಕವೇ ಸಮಾಜವನ್ನು ತಿದ್ದಲು ಸಾಧ್ಯ; ದ್ವೇಶದಿಂದ ಇನ್ನೂ ಕ್ಲಿಷ್ಟಕರವಾಗುವುದೆಂಬುದು ಪೈಗಂಬರರ ಶಿಕ್ಷಣವಾಗಿತ್ತು.
ಬೆಂಕಿಯನ್ನು ಬೆಂಕಿಯಿಂದ ನಂದಿಸಲು ಸಾಧ್ಯವಿಲ್ಲ; ರಕ್ತವನ್ನು ರಕ್ತದಿಂದ ತೊಳೆಯುವುದೂ ಅಲ್ಲ, ಹಾಗೆ ಮಾಡಿದರೆ ಅದು ಇನ್ನೂ ವೃದ್ಧಿಸುವುದು. ನೀರಿನಿಂದಲೇ ಅಳಿಸಬೇಕಿದೆ, ಕೆಡಿಸುವುದು ಮತ್ತು ವಿನಾಶ ಸುಲಭ, ಅದು ಸಾಧನೆಯೂ ಅಲ್ಲ, ನಿರ್ಮಾಣದಲ್ಲಿ ಗುರುತಿಸುವುದು ಸಾಧನೆಯಾಗಿದೆ.
ಅಜ್ಞಾನದ ಅಂಧಕಾರದಲ್ಲಿ ಮುಳುಗಿದ್ದ ತಾಯಿಫ್ ನಗರದ ಜನರಿಗೆ ಜ್ಞಾನದ ಪ್ರಕಾಶದ ಮೂಲಕ ಸಹಾಯ ಮಾಡಲು ಹೋದಾಗ, ಬೀದಿ ಪುಂಡರನ್ನು ಪ್ರವಾದಿಯವರ ಹಿಂದೆ ಛೂ ಬಿಡಲಾಗುತ್ತದೆ. ಆ ಪುಂಡರು ಅವರನ್ನು ಕಲ್ಲುಗಳಿಂದ ಮಾರಣಾಂತಿಕವಾಗಿ ಹಲ್ಲೆನಡೆಸಿ, ದೇಹವಿಡೀ ರಕ್ತಸಿಕ್ತಗೊಳಿಸುತ್ತಾರೆ, ಪ್ರಜ್ನೆ ತಪ್ಪಿ ಬೀಳುತ್ತಾರೆ. ಪ್ರಜ್ಞೆ ಬಂದ ಮೇಲೆ ಅವರ ಅನುಚರರು ಅವರಿಗೆ ಶಾಪಕ್ಕಾಗಿ ಅಲ್ಲಾಹನಲ್ಲಿ ಪ್ರಾರ್ಥಿಸಿರಿಯೆಂದು ಹೇಳಿದಾಗ, ನಾನು ಒಳಿತಿನ ಪ್ರಾರ್ಥನೆಗಾಗಿ ಬಂದವನೆನ್ನುತ್ತಾರೆ. ದೇವದೂತ ಪ್ರತ್ಯಕ್ಷನಾಗಿ ನಿಮ್ಮ ಅನುಮತಿಯಿದ್ದರೆ ಈ ಜನರನ್ನು ನಾಶ ಮಾಡೆಂಬ ಆಜ್ಞೆ ಇದೆಯೆನ್ನುತ್ತಾರೆ, ಬೇಡ ಬೇಡ, ಇವರಿಗೆ ತಿಳಿದಿಲ್ಲ, ಇವರ ಸಂತತಿ ಸರಿ ಹಾದಿಗೆ ಬಂದಾರೆಂದು ಮರ್ದಕರನ್ನು ಕ್ಷಮಿಸುವಂತೆ ಅಲ್ಲಾಹನಲ್ಲಿ ಪ್ರಾರ್ಥಿಸುತ್ತಾರೆ.
ಪೈಗಂಬರರ ನಿತ್ಯದ ಹಾದಿಯಲ್ಲಿ ಓರ್ವ ಸ್ತ್ರೀ ತನ್ನ ಮನೆಯ ಮೇಲ್ಚಾವಣಿಯಿಂದ ಅವರ ಮೇಲೆ ಕಸ ಕಡ್ಡಿಗಳನ್ನು ಎಸೆಯುತ್ತಿದ್ದಳು. ಈ ನಿತ್ಯದಿನಚರಿ ಒಂದೆರಡು ದಿನ ನಡೆಯದೆ ಇದ್ದಾಗ, ಪ್ರವಾದಿಯವರು ಆಕೆ ಅಸೌಖ್ಯಳಾಗಿರಬಹುದೋ ಎಂದು ವ್ಯಾಕುಲಗೊಂಡರು ಮತ್ತು ಕೂಡಲೇ ಆಕೆಯ ಮನೆಗೆ ತೆರಳಿದರು. ಪ್ರವಾದಿಯವರನ್ನು ಕಂಡ ಆ ಸ್ತ್ರೀ ಹೆದರಿ ಕೊಳ್ಳುತ್ತಾಳೆ. ಪೈಗಂಬರರು ಆಕೆಯ ಆರೋಗ್ಯ ವಿಚಾರಿಸಿ ಸಾಂತ್ವನ ನೀಡಿ ಮರಳಿದರು. ಆಂದಿನಿಂದ ಎಂದೂ ಪ್ರವಾದಿಯವರ ಮೇಲೆ ಅಲ್ಲಿಂದ ಕಸ ಬೀಳಲಿಲ್ಲ.ಸಮಾಜ ನಿರ್ಮಾಣದ ಪ್ರಮುಖ ಭಾಗವಾಗಿ ಸ್ತ್ರೀಯರಿಗೆ ಉನ್ನತ ಸ್ಥಾನ ಕೊಡಿಸಿದುದು ಪೈಗಂಬರರ ಮಹತ್ಸಾಧನೆಗಳಲ್ಲೊಂದು.
ಅನಾಥೆ, ವಿಚ್ಛೇದಿತೆ ಹಾಗೂ ವಿಧವೆಯರ ವಿವಾಹಗಳನ್ನು ಪ್ರೋತ್ಸಾಹಿಸಿದರು. ಹೆಣ್ಮಕ್ಕಳಣ್ಣು ಪೋಷಿಸಿ, ಕಲಿಸಿ, ವಿವಾಹ ಮಾಡಿ ಕೊಡುವ ತಂದೆಯಂದಿರಿಗೆ ಸ್ವರ್ಗದ ಸುವಾರ್ತೆ ನೀಡಿದರು. ತಾಯಿಯ ಪಾದದಡಿ ಸ್ವರ್ಗವೆಂದೂ ಮಹಿಳೆಯ ಸ್ಥಾನವನ್ನು ಉನ್ನತಿಗೇರಿಸಿದರು.
ಪ್ರವಾದಿಗಳ ನಡೆ-ನುಡಿ, ರೀತಿ-ನೀತಿ, ಆಚಾರ-ವಿಚಾರಗಳನ್ನು ಹೀಗೆ ಸೂಕ್ಷ್ಮವಾಗಿ ಪರಿಶೀಲಿಸುತ್ತ ಹೋದಾಗ ಮಾನವ ಕಲ್ಯಾಣವನ್ನು ಬಯಸುವ ಯಾರಿಗೇ ಆದರೂ ಮಹಮ್ಮದರು ಅಂದಿಗಷ್ಟೇ ಅಲ್ಲ, ಇಂದಿಗೂ ಎಂದೆಂದಿಗೂ ಹೆಚ್ಚು ಪ್ರಸ್ತುತರೆನಿಸದೆ ಇರಲಾರದು.
ಮೈಕಲ್ ಹರ್ಟ್ ಎಂಬ ಪ್ರಸಿದ್ಧ ಲೇಖಕರೊಬ್ಬರು ಬರೆದಿರುವ The 100- Most influential persons in History ಎಂಬ ಕೃತಿಯಲ್ಲಿ ಮೊದಲ ಸ್ಥಾನವನ್ನು ತನ್ನ ಧರ್ಮ ಜೀಸಸನಿಗೂ ನೀಡದೇ ಇಸ್ಲಾಂ ಧರ್ಮದ ಪೈಗಂಬರ್ ಮುಹಮ್ಮದರಿಗೆ ನೀಡಿದ್ದಾರೆ. ಇದಕ್ಕೆ ಅವರು ನೀಡುವ ಕಾರಣವೇನೆಂದರೆ ಪ್ರವಾದಿ ಮುಹಮ್ಮದ್ ﷺ ರು ಧರ್ಮಭೋಧಕರಾಗಿ ಮಾತ್ರ ಗುರುತಿಸಲ್ಪಡದೆ ಸಮಾನತೆಯ ಹರಿಕಾರರಾಗಿದ್ದಾರೆ ಎಂಬುವುದಾಗಿತ್ತು.ಈ ಪಾವನ ಆದರ್ಶ ಜೀವನವನ್ನು ಮಾದರಿಯಾಗಿಸಿ ನಮ್ಮ ಕಾರ್ಯವೈಖರಿಗಳಲ್ಲಿ ಮೈಗೂಡಿಸಿ ಕ್ರಾಂತಿ ಕಾರಿಯ ಸಮಾಜವನ್ನು ಜನತೆಯನ್ನು ಸೃಷ್ಠಿಸೋಣ.