ಜನಜೀವನದ ಸುಧಾರಣೆ ಹಾಗೂ ಸೃಷ್ಟಿಕರ್ತನ ಸಂದೇಶವನ್ನು ಜನತೆಗೆ ತಲುಪಿಸುವ ಗುರಿಯೊಂದಿಗೆ ಅಲ್ಲಾಹನು ಪ್ರವಾದಿಗಳನ್ನು ಜನರೆಡೆಯಿಂದಲೇ ನೇಮಕಗೊಳಸಿದ್ದಾನೆ. ಹಝ್ರತ್ ಆದಂ(ಅ) ರಿಂದ ಅಂತ್ಯ ಪ್ರವಾದಿ ಪೈಗಂಬರ್ (ಸ.ಅ) ರವರೆಗೆ ಆಯಾ ಪ್ರದೇಶದ ಜನತೆಗೆ ಲಕ್ಷಕ್ಕಿಂತಲೂ ಹೆಚ್ಚು ಪ್ರವಾದಿಗಳ ಮೂಲಕ ಅಲ್ಲಾಹನು ಏಕತ್ವದ ಸಂದೇಶಗಳನ್ನು ಸೃಷ್ಟಿಗಳಿಗೆ ತಲುಪುವಂತೆ ಮಾಡಿದ್ದಾನೆ.
ಆರನೇ ಯುಗದ ಅರಬ್ ವಂಶಜರಿಂದ ಪೈಗಂಬರ್ ಮುಹಮ್ಮದ್ (ಸ.ಅ) ರ ಮೂಲಕ ವಿಶ್ವದಾದ್ಯಂತ ಏಕದೇವಾರಾಧನೆಯನ್ನು ಬೋಧಿಸುವ ಸಲುವಾಗ ಅಂತ್ಯದೂತರನ್ನು ಆಯ್ಕೆ ಮಾಡುವ ವೇಳೆ ಸಾಮಾಜಿಕ ಅಸಮತೋಲನ, ಗೋತ್ರಗಳ ಹೆಸರಿನಲ್ಲಿದ್ದ ಕಾಳಗ, ವರ್ಣ ಬೇಧ ಭಾವ, ಮಹಿಳಾ ದೌರ್ಜನ್ಯ, ಆರ್ಥಿಕ ಅಭದ್ರತೆ ಮುಂತಾದ ಹತ್ತು ಹಲವು ವಿಚಾರಗಳು ಜನರನ್ನು ತೀರಾ ಸಂಕಷ್ಟಕ್ಕೀಡು ಮಾಡಿತ್ತು.
ಸಾಮಾಜಿಕ ಸುಧಾರಣೆಯೊಂದಿಗೆ ಏಕದೇವಾರಾಧನೆಯ ಮಂತ್ರವನ್ನು ಮೊಳಗಿಸಲು ಪ್ರವಾದಿಯವರು ಎದುರಿಸಿದ ಬವಣೆ ಅಷ್ಟಿಷ್ಟಲ್ಲ. ತನ್ನದೇ ಗೋತ್ರದ ಜನತೆಯಿಂದ ಎದುರಿಸಿದ ವಿರೋಧದ ಮಧ್ಯೆ ದೃಢವಾದ ಹೆಜ್ಜೆಯೊಂದಿಗೆ ಖುರ್ ಆನಿನ ಸಂದೇಶವನ್ನು ಇಪ್ಪತ್ತ ಮೂರು ವರ್ಷದಲ್ಲಿ ಜನತೆಗೆ ತಲುಪಿಸಿ ಅಲ್ಲಾಹನು ನೀಡಿದ ಕರ್ತವ್ಯಗಳನ್ನು ಸುಂದರವಾಗಿ ನಿಭಾಯಿಸಿದರು. ವರ್ಣ–ದೇಶ–ಭಾಷೆ ಇವುಗಳೆಲ್ಲವೂ ಅಲ್ಲಾಹನು ಜನತೆಗೆ ಗುರುತಿಸುವ ಚಿಹ್ನೆಗಳನ್ನಾಗಿ ನೀಡಿದ್ದು, ತಮ್ಮಲ್ಲಿ ಅಲ್ಲಾಹನ ಸಂದೇಶಗಳನ್ನು ಪಾಲಿಸಿ ಜೀವನವನ್ನು ಸಫಲಗೊಳಿಸುವವರು ಅತ್ಯತ್ತಮರೆಂಬ ಸಂದೇಶದ ಮೂಲಕ ಭೌತಿಕವಾದ ಸ್ಥಾನಕ್ಕಿಂತ ಆಧ್ಯಾತ್ಮಿಕ ಉನ್ನತಿಯೇ ಮೇಲು ಎಂಬ ಧೊರಣೆಯನ್ನು ಜನತೆಗೆ ತಿಳಿಹೇಳಿದರು.
ಕಠೋರತೆಯ ಪ್ರತೀಕವಾಗಿ ಬಿಂಬಿಸುತ್ತಿದ್ದ ಹಝ್ರತ್ ಉಮರ್(ರ) ಸತ್ಯ ಸಂದೇಶವನ್ನು ಸ್ವೀಕರಸಿದ ಬಳಿಕ ನ್ಯಾಯ–ನಿಷ್ಠೆಯ ಪ್ರತೀಕವಾಗಿ ಜಗತ್ತಿಗೇ ಮಾದರಿಯಾದದ್ದು ಪೈಗಂಬರರ ಬೋಧನೆಯ ಸುಧಾರಣೆಯ ಬಗೆಗಿನ ಕೈಗನ್ನಡಿಯಾಗಿತ್ತು. ಸಮಾಜದಲ್ಲಿ ಹಿಂದುಳಿದು ಜೀವನ ಸಾಗಿಸಬೇಕಾಗಿದ್ದ ಹಝ್ರತ್ ಬಿಲಾಲರ ಮೂಲಕ ಅದ್ಸಾನಿನ ಶಬ್ದವನ್ನು ಮೊಳಗಿಸುವ ಮೂಲಕ ಪೈಗಂಬರರು ಸಮಾನತೆಯ ಸಂದೇಶ ಸಾರುವುದರೊಂದಿಗೆ ಅನಾಥ–ನಿರ್ಗತಿಕ ಮಕ್ಕಳು, ಅಬಲೆಯರಿಗೆ ಸಂರಕ್ಷಣೆಯನ್ನು ನೀಡುವ ಮೂಲಕ ದೃಢತೆಯನ್ನು ಹೊಂದಿದವರು ಮಾಡಬೇಕಾದ ಕರ್ತವ್ಯಗಳೇನು ಎಂಬುವುದನ್ನು ಸ್ವತಹ ನಿರ್ವಹಿಸಿ ಮಾದರಿಯೆನಿಸಿದರು.
ಹದಿನಾಲ್ಕು ಶತಕಗಳ ಹಿಂದಿನ ಪ್ರವಾದಿ ವಚನ ಹಾಗೂ ಜೀವನದ ಮಾದರಿಗಳು ಇಂದಿಗೂ ಜೀವಂತವಾಗಿದ್ದಿರಬೇಕಾದರೆ ಪ್ರವಾದಿಯವರು ನಿರ್ವಹಿಸಿದ ತ್ಯಾಗೋಜ್ಜಲ ಜೀವನದ ಪ್ರಭಾವ ಎಷ್ಟು ಆಳದಲ್ಲಿ ಬೋರೂರಿತ್ತು ಎನ್ನುವುದನ್ನು ಊಹಿಸಿದರೆ ಸಾಕು. ಅತಂತ್ರವಾದ ಬದುಕಿಗೆ ಶಾಶ್ವತ ನೆಲೆಯನ್ನು ಕಲ್ಪಿಸಿ ಸಾಹೋದರ್ಯತೆಯ ಉತ್ತಮ ರೀತಿಯನ್ನು ಪರಿಚಯಿಸುವ ಮೂಲಕ ಶಾಂತಿ ಸಹಬಾಳ್ವೆಯನ್ನು ಸ್ಥಾಪಿಸಿದ ಶಾಂತಿ ದೂತರನ್ನು ಇನ್ನಷ್ಟು ಜನರಿಗೆ ಪರಿಚಯಿಸುವ ಮೂಲಕ ಪುಣ್ಯ ರಬೀಅ ಮಾಸವನ್ನು ಸಂಪತ್ಭರಿತಗೊಳಿಸೋಣ.
— Author —